May 4, 2008 by aksharavihaara
ಒಬ್ಬ ಪತ್ರಕರ್ತನಾಗಿ ಕಲಿಯಬೇಕಾಗಿರುವ ಕೆಲಸಗಳು ಸಾಕಷ್ಟು ಇರುವುದರಿಂದ, ಒಂದಿಷ್ಟು ತೆವಲುಗಳನ್ನು ಮೈಗಂಟಿಸಿಕೊಂಡು ಕೂತಿರುವುದರಿಂದ, ಅದರ ಜೊತೆಗೆ ಬರಹ ಅನ್ನುವುದು ಬೇಸರಮೂಡಿಸುತ್ತಿರುವುದರಿಂದ ಇಲ್ಲಿನ ನನ್ನ ವಿಹಾರವನ್ನು ಮುಗಿಸುತ್ತಿದ್ದೇನೆ. ಇಲ್ಲಿಯವರೆಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದ ಕಾಲೆಳೆದು ತಪ್ಪನ್ನು ತಿದ್ದಿದ್ದ ನಿಮಗೆ ಧನ್ಯವಾದಗಳು. ಬ್ಲಾಗ್‌ಎಂಬುದರ ಗಂಧಗಾಳಿಯೂ ಗೊತ್ತಿಲ್ಲದವನಿಗೆ ಅದನ್ನು ಕಲಿಸಿ, ನನ್ನ ಬ್ಲಾಗಿಗೊಂದು ಸುಣ್ಣ ಬಣ್ಣ ಬಳಿದು ಸ್ವಚ್ಛಂದಗೊಳಿಸಿಕೊಟ್ಟ ಅಕ್ಕಾ ಚೇತನಾ ತೀರ್ಥಹಳ್ಳಿಗೂ ವಿಶೇಷ ಧನ್ಯವಾದಗಳು. ಮತ್ತೆ ಬಂದರೆ ನೀವು ನನ್ನ ವಿಹಾರಕ್ಕೆ ಸಾಥು ನೀಡುವಿರಿ ಎಂಬ ಭರವಸೆಯೊಂದಿಗೆ
ವಿನಾಯಕ
Posted in ಕಥೆ-ವ್ಯಥೆ! | 2 Comments »
May 2, 2008 by aksharavihaara
ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು. ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ…..ಛೇ ಇವತ್ತು ಅದನ್ನು ನೆನಸಿಕೊಂಡ್ರೆ ತುಂಬಾ ಫೀಲ್ ಆಗತ್ತೆ.
ಬೆಳಿಗ್ಗೆ ಆರು ಗಂಟೆಗೆ ಶುರು ನಮ್ಮ ಕಿರಿಕೆಟ್ಟು ಮ್ಯಾಚು! ಸುಮಾರು ಒಂಬತ್ತು ಘಂಟೆಗೆವರೆಗೂ ಕಿರಿಕೆಟ್ಟಾಡಿ ಕೊನೆಗೆ ಲೈಟಾಗೊಂದು ನಾಸ್ಟಾ ಮಾಡಿ ಅಪ್ಪ ಮನೇಲಿ ಇದ್ದಿದ್ದೂ ಹೌದಾದ್ರೆ ಗಡದ್ದಾಗಿ ಸ್ನಾನ ಮಾಡಿ ಅಪ್ಪನ ಎದುರಿಗೆ ಸಂಧ್ಯಾವಂದನೆ ಮಾಡೋ ನಾಟಕವಾಡಿ, ಗಾಯಿತ್ರಿ ಮಂತ್ರ ಹೇಳೋ ಕಾಲದಲ್ಲಿ ಯಾರ್ಯಾರದ್ದೋ ಹೆಸರು ಹೇಳಿ ಅಮ್ಮನ ಹತ್ರಾ ಬೈಸಿಕೊಂಡು ಕೊನೆಗೆ ಗುಡ್ಡ ಹತ್ತಿದ್ವೀ ಅಂದ್ರೆ ಶುರು ನೋಡಿ ನಮ್ಮ ದಿನಚರಿ!
ಹಾಳಾದ ಬೆಂಗಳೂರಿನಲ್ಲೂ ನಮ್ಮ ದಿನಚರಿಯಿದೆ. ಅದನ್ನಾ ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಅಂದಹಾಗೇ ಗುಡ್ಡ ಹತ್ತುವ ಮೊದಲು ಒಂದಿಷ್ಟು ನೇರಳೆ ಹಣ್ಣಿನ ನೈವೇದ್ಯ ನಮಗೆ ಆಗಲೇ ಬೇಕಿತ್ತು. ಮಲೆನಾಡಿನಲ್ಲಿ ಬಿಡುವ ವಿಶಿಷ್ಟ ಹಣ್ಣುಗಳ ಪೈಕಿ ನೇರಳೆ ಉತ್ಕೃಷ್ಟವಾದದ್ದು. ನಾನು ಅತೀ ಇಷ್ಟಪಡುವ ಹಣ್ಣು ಅದೆ.ತುಂಬಾ ಸಿಹಿಯಾಗಿರುವ ತುಂಬಾ ರುಚಿಯುತವಾದ ಹಣ್ಣು ಅದು. ತಿಂದಷ್ಟು ತಿನ್ನಬೆಕು ಅನ್ಸತ್ತೆ. ಅದರ ಮುಂದೆ ನಿಮ್ಮ ಆಪಲ್ಲು, ಗ್ರೇಪು ಯಾವುದೂ ಅಲ್ಲ! ಅಷ್ಟು ರುಚಿ. ಅದನ್ನ ಒಂದು ರೌಂಡ್ ತಿಂದು ಮುಗಿಸಿ ನಮ್ಮ ಸೈನ್ಯ ಪಯಣ ಮುಂದುವರೆಸುವಾಗ ಘಂಟೆ ಹನ್ನೆರಡು ಆಗಿರುತ್ತಿತ್ತು. ಕೊನೆಗೆ ಗೇರು ಬ್ಯಾಣಕ್ಕೆ ನುಗ್ಗಿ ಒಂದಿಷ್ಟು ಗೇರು ಹಣ್ಣು ತಿಂದು ಯಾರದ್ದೋ ಬ್ಯಾಣದ ಗೇರು ಪೀಠ ಕದ್ದು ಅವರ ಹತ್ರಾ ಬೈಸಿಕೊಂಡು ರಂಪಾ ರಾಮಾಯಣ ಮುಗಿಯುವ ಹೊತ್ತಿಗೆ ಊಟದ ನೆನಪು. ನಿಜವಾಗ್ಲೂ ಊಟ ನಮಗೆ ಬೇಡದೇ ಹೋದ್ರು ಅಪ್ಪ, ಅಮ್ಮ ಬೈತಾರಲ್ಲ ಅಂತಾ ನಾವು ಅವರನ್ನ ಬೈದುಕೊಳ್ಳುತ್ತಾ ಊಟಕ್ಕೆ ಬರೋದು.
ಆಮೇಲೆ ದಿನಚರಿಯ ಎರಡನೇ ಅಧ್ಯಾಯ. ಈಚಲು ಹಣ್ಣಿನ ಬೇಟೆ! ಒಂತರಹ ಒಣ ದ್ರಾಕ್ಷಿ ರುಚಿಯುಳ್ಳಪಸಂದಾದ ಹಣ್ಣು ಅದು. ಈಗಂತೂ ಸುಡುಗಾಡು ನೀಲಗಿರಿ ಪ್ಲಾಂಟೇಶನ್ನಾಗಿ ಒಂದು ಈಚಲು ಮಟ್ಟಿನೇ ಇಲ್ಲ ನಮ್ಮ ಮನೆ ಹತ್ರಾ. ಇದಾದ ಮ್ಯಾಕೆ ಮರಕೋತಿ, ಮಣ್ಣು ಮಸಿ ಅಂತಾ ಹುಚ್ಚುಚ್ಚು ಆಟ. ಕೊನೆಗೆ ೪.೩೦ಕ್ಕೆ ಎಂಟರ್ ದೀ ಫೀಲ್ಡ್ ಫಾರ್ ಪ್ಲೇಯಿಂಗ್ ಕಿರಿಕೆಟ್ಟು. ಆಚೆ ಮನೆ ಅಜ್ಜ, ಇಚಿಗೆ ಕಾಡಜ್ಜನ ಮನೆ ಅಮ್ಮಮ್ಮ ಎಲ್ಲಾ ಗಟ್ಟಿಯಾಗಿ ನಿದ್ದೆ ಮಾಡ್ತಾ ಇದ್ದರೆ ನಾವು ಕೂಗಿ ಕಬ್ಬರಿಯುವುದು. ಅರೆನಿದ್ದೆಗಣ್ಣಲ್ಲಿದ್ದ ಅವರು ಬೆತ್ತ ತಗೊಂಡು ಆಲದ ಮರದವರೆಗೆ ನಮ್ಮನ್ನ ಬೆರೆಸಿಕೊಂಡು ಬರ್ತಾ ಇದ್ದಿದ್ದನ್ನು ನೆನಸಿಕೊಂಡ್ರೆ ಇವತ್ತಿಗೂ ನಗು ಬರತ್ತೆ.
ಮುಂದುವರೆಯುವುದು…..
Posted in ಕ್ರಿಯೇಟಿವ್ ಪೇಜ್ | No Comments »
April 27, 2008 by aksharavihaara
ಮಹಿಳಾ ಮೀಸಲಾತಿ ಇನ್ನೂ ಅನಿವಾರ್ಯವೇ? ಹೀಗೊಂದು ಪ್ರಶ್ನೆ ನನ್ನ ತಲೆಯಲ್ಲಿ ಗಿರಕಿ ಹೊಡೆಯಲು ಪ್ರಾರಂಭಿಸಿದ್ದು ಮೊನ್ನೆ ಬಸಲ್ಲಿ ಕುಳಿತಿದ್ದ ನನ್ನನ್ನು ಇದು ಲೇಡೀಸ್ ಸೀಟು ಸಾರ್ ಎಂದು ಮಹಿಳೆಯೊಬ್ಬಳು ಎಬ್ಬಿಸಿದ ನಂತರ!ಥಟ್ಟನೆ ಅಕ್ಕ ಗುನುಗುತ್ತಿದ್ದ ಮಹಿಳೆಗೆ ಎಷ್ಟೇ ಮೀಸಲಾತಿ ಕೊಟ್ಟರೂ ಅತ್ತೆ ಮನೆಯಲ್ಲಿ ದಬ್ಬಳಿಕೆ ಸಹಿಸಿಕೊಂಡು ಇರುವ ಮಹಿಳೆಗೆ ಆ ಸಂಕೋಲೆಯಿಂದ ಹೊರಬಂದು ಮೀಸಲಾತಿ ಉಪಯೋಗಿಸಿಕೊಳ್ಳುವುದು ತುಂಬಾನೇ ಕಷ್ಟ ಅನ್ನೋ ಡೈಲಾಗ್ ನೆನಪಾಯಿತು!ಅತ್ತೆ ಮನೆಯಲ್ಲಿ ಸಂಕಷ್ಟ ಇರೋ ಮಹಿಳೆಗೆ ಮೀಸಲಾತಿ ಉಪಯೋಗ ಆಗೋದು ಬಸ್ಸಿನ ಸೀಟಲ್ಲಿ ಮಾತ್ರ ಅನ್ನಿಸಿತು!
ಅಂದಹಾಗೇ ಕಲಿಯುಗವಪ್ಪಾ ಅಂತಾ ಕರೆಯುವ ಈ ಕಾಲದಲ್ಲೂ ಮಹಿಳೆಗೆ ಮೀಸಲಾತಿ ಬೇಕಾ? ಮೀಸಲಾತಿ ಅನ್ನೋ ಪದದ ಅರ್ಥವೇ ಕೆಳವರ್ಗದ ಜನರನ್ನು ಮೇಲಕ್ಕೆ ತರುವುದಂತೆ! ಮಹಿಳೆ ಕೆಳವರ್ಗಕ್ಕೆ ಸೇರಿದವಳಾ? ಒಂದು ಕಾಲದಲ್ಲಿ ಸೌಟು ಹಿಡಿದು ಅಡುಗೆ ಮನೆಯಲ್ಲಿ ಕುಳಿತ್ತಿದ್ದ ಮಹಿಳೆ ಇಂದು ಎಲ್ಲಾ ರಂಗಕ್ಕೂ ಕಾಲಿಟ್ಟಿದ್ದಾಳೆ. ಯಾವ ರಂಗದಲ್ಲೂ ತಾನು ಪುರುಷನಿಗಿಂತ ಕಡಿಮೆಯಲ್ಲ ಅನ್ನೋದನ್ನ ಸಾಬೀತು ಪಡಿಸಿದ್ದಾಳೆ. ಎಲ್ಲದರಲ್ಲೂ ಅಂದರೆ ಕುಡಿತ, ಸಿಗರೇಟು ಸೇದುವುದು, ಕ್ಲಬ್‌ಗೆ ಹೋಗುವುದರಿಂದ ಹಿಡಿದು ಐ.ಪಿ.ಎಸ್ ಅಧಿಕಾರಿಯಾಗುವವರೆಗೂ! ಹೀಗಿರುವಾಗ ನಾವಿನ್ನೂ ಆಕೆಯನ್ನು ಹಿಂದುಳಿದವಳು ಅಂತಾ ಟ್ರೀಟ್ ಮಾಡೋದು ಸರಿನಾ?!
ಒಂದು ಕಾಲದಲ್ಲಿ ಮಾವನ ಮನೆಯ ಕೂಪದಿಂದ ಹೊರಬರುತ್ತಿರಲ್ಲಿಲ್ಲ ಮಹಿಳೆ, ಗಂಡನನ್ನೇ ದೇವರು ಅಂತಾ ಆರಾಧಿಸುತ್ತಿದ್ದಳು. ಅವ ಎಂಥಾ ಗಂಡನಾದರೂ ಕೂಡಾ! ಆದರೆ ಇವತ್ತು ಆಕೆ ಆ ಕೂಪದಿಂದ ಹೊರಬಂದಿದ್ದಾಳೆ. ತನ್ನ ಹಕ್ಕುಗಳ ಕುರಿತಾಗಿ ಅರಿತುಕೊಳ್ಳುವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾಳೆ. ಗಂಡನ್ನ ಬಿಟ್ಟು ಕೂಡಾ ಇದೇ ಪ್ರಪಂಚದಲ್ಲಿ ಬದುಕಬಹುದು ಅನ್ನುವ ವಿಚಾರವೊಂದು ಅವಳಿಗೆ ಗೊತ್ತಾಗುವಷ್ಟರ ಮಟ್ಟಿಗೆ ಆಕೆ ಮುಂದಿವರೆದಿದ್ದಾಳೆ. ಇಂತಹ ಮಹಿಳೆಯನ್ನು ನಾವು ಇನ್ನೂ ಹಿಂದುಳಿದವಳು, ಮುಂದೆ ಬರಲು ಮೀಸಲಾತಿ ಬಯಸುವವಳು ಅಂತೆಲ್ಲಾ ಶೋಷಿಸುವುದು ಸರಿನಾ?
ಪ್ರತಿಭೆಯಿದ್ದು ಬೆಳೆಯುವ ತಾಕತ್ತಿರುವ ಮಹಿಳೆಗೆ ಮೀಸಲಾತಿಯ ಅಗತ್ಯವಿಲ್ಲ ಅನ್ನುವುದು ಮಹಿಳೆಯರೇ ಒಪ್ಪುತ್ತಾರೆ. ಇನ್ನೂ ಇವತ್ತಿಗೂ ಅತ್ತೆ ಮನೆ ಅಂಗಳದಲ್ಲಿ ಕೊಳೆಯುವ ಮಹಿಳೆಗೆ ಅಕ್ಕಾ ಹೇಳಿದ ಹಾಗೇ ಮೀಸಲಾತಿ ಕೊಟ್ಟರೂ ಪ್ರಯೋಜನವಿಲ್ಲ. ಒಟ್ಟಲ್ಲಿ ಹೇಳೋದಾದರೆ ಸ್ವಾಭಿಮಾನಿ ಅನ್ನಿಸಿಕೊಂಡಿರುವ ಮಹಿಳೆಯರಿಗೆ ಮೀಸಲಾತಿ ಕೊಡುವುದು ಅವಮಾನವೀಯ ಸಂಗತಿ. ಯಾವುದೋ ಅನುಕಂಪದ ಮೇಲೆ ಕರುಣೆಯ ಮೇಲೆ ತಾನು ಮುಂದುಬರುವುದನ್ನು ಯಾರು ಬಯಸುತ್ತಾರೆ ಹೇಳಿ? ಎಲ್ಲರಿಗೂ ಒಂಚೂರಾದರೂ ಸ್ವಾಭಿಮಾನ ಇರತ್ತೆ ಅಲ್ವಾ?
ಮೀಸಲಾತಿಯ ಹಂಗಿಲ್ಲದೇ ಯಾರದ್ದು ಕರುಣೆ ಅನುಕಂಪಗಳಿಲ್ಲದೇ ಬೆಳೆದು ನಿಂತಿರುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ.ಅಂತಹವರನ್ನು ಮುಂದಿಟ್ಟುಕೊಂಡು ಕೂಡಾ ನಾವು ಇನ್ನೂ ಮೀಸಲಾತಿ ದಾಸರಾಗಿರುವುದು ಎಷ್ಟು ಸಮಂಜಸ? ಪಕ್ಷದವರು ಟಿಕೇಟ್ ಕೊಡಲಿಲ್ಲ ಅಂತಾ ಕೂಗಾಡುವುದು ಎಷ್ಟು ಸರಿ? ಅನ್ನೋದನ್ನಾ ಮಹಿಳಾವಾದಿಗಳಾದ ಪ್ರಮೀಳನೇಸರ್ಗಿ, ಲಲಿತಾ ನಾಯಕ್‌ರಂತಹವರನ್ನೇ ಕೇಳಬೇಕು! ಅಂದಹಾಗೇ ಆ ಮಹಿಳಾ ವಾದಿಗಳೆಲ್ಲಾ ಬೆಳೆದಿದ್ದು ಮೀಸಲಾತಿಯಿಂದಾನೂ ಅಲ್ಲ. ಪ್ರತಿಭೆಯಿಂದಾನೂ ಅಲ್ಲ. ಮತ್ತ್ಯಾವುದರಿಂದ ಅಂತಾ ಪ್ರತ್ಯೇಕವಾಗಿ ಹೇಳೋದು ಬೇಡ ಅಲ್ವಾ?!
Posted in ಚಿಂತನಾ ಚಾವಡಿ | 2 Comments »
April 25, 2008 by aksharavihaara
ನಮಸ್ಕಾರ.
ನಾನು ಇತ್ತೀಚೆಗೆ ಠಕ್ಕ ಠಿಕ್ಕ ಮತ್ತು ಸಾಧು ಅನ್ನುವ ಲೇಖನವನ್ನ ‘ಕಥೆ-ವ್ಯಥೆ’ ಕಾಲಮ್ಮಿನಡಿಯಲ್ಲಿ ಬರೆದಿದ್ದೆ. ಅದು ಯಾವುದೇ ಆದರ್ಶ ಹೊತ್ತು ಪತ್ರಿಕೆ ಶುರು ಮಾಡಿದ ಗೆಳೆಯರ ಗುಂಪಿಗೆ ಹೋಲುವಂತಿತ್ತು. ಆದರೆ ನೂರಕ್ಕೆ ನೂರು ನನ್ನ ಮನಸಲ್ಲಿ ಹಾಗೆ ಬರೆಯುವಾಗ ಯಾವ ನಿರ್ದಿಷ್ಟ ವ್ಯಕ್ತಿಗಳಾಗಲೀ ಪತ್ರಿಕೆಯಾಗಲೀ ಇರಲಿಲ್ಲ.
ದುರಂತ ನೋಡಿ… ನಾನು ಯಾವ ವ್ಯಕ್ತಿಯನ್ನು ಬಹಳ ಪ್ರೀತಿಸ್ತೇನೋ ಅ ವ್ಯಕ್ತಿಯ ಹೆಸರು ಈ ಲೇಖನಕ್ಕೆ ಹೊಂದಿಕೊಂಡು ಬಂತು.
ಗೆಳೆಯನೊಬ್ಬ ಈ ಹಿಂದೆಯೇ “ಇದು ‘ಆ’ ಪತ್ರಿಕೆ ಕಥೆ ಇದ್ದ ಹಾಗಿದ್ಯೋ” ಅಂದಿದ್ದ. ಆದರೆ ಅದರಲ್ಲಿ ಠಕ್ಕರು ಯಾರೂ ಇರಲಿಲ್ಲವಾದ್ದರಿಂದ ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಎರಡು ಮೂರು ಪ್ರತಿಕ್ರಿಯೆಗಳು ಹೀಗೆ ಬಂದಿದ್ದರಿಂದ ನನಗೆ ಇದು ಮತ್ತೇನೋ ವಿವಾದ ಹುಟ್ಟುಹಾಕಲಿದೆ ಅನಿಸಿಬಿಟ್ಟಿತು. ಆಯಾ ಲೇಖಕರ ಅಭಿಮಾನಿಗಳು ಪರಸ್ಪರ ದೂರಾದೂರಿಗಿಳಿದರೆ? ಊಹೂಂ… ಅಂಥ ಕಿಡಿ ಹಚ್ಚುವ ಕೆಲಸ ನನ್ನಿಂದಾಗಬಾರದು.
ಅದಕ್ಕೇ, ನಾನು ಆ ಪೋಸ್ಟನ್ನು ಡಿಲೀಟ್ ಮಾಡಿರುವೆ. ಕಡ್ಡಾಯವಾಗಿ ಆ ಬಗೆಯ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸುವೆ. ಈ ಸಂಬಂಧ ಬರುವ ಯಾವುದೇ ಕಮೆಂಟನ್ನು ಮಾಡರೇಟ್ ಮಾಡುವುದಿಲ್ಲ.
ನನಗೆ ಸಂವಾದ ನಡೆಸುವ ಆಸೆ ಹೊರತು ವಿವಾದ ಹುಟ್ಟುಹಾಕುವುದಲ್ಲ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾಅರ್ ಕೋರುತ್ತ,
-ವಿನಾಯಕ ಕೆ.ಎಸ್.
Posted in 1 | No Comments »
April 18, 2008 by aksharavihaara
ಮೊನ್ನೆಮೊನ್ನೆವರೆಗೆ ೧ರೂ ಇದ್ದ ಲಿಂಬೆಹಣ್ಣು ಇವತ್ತು ೩ರೂ ಆಗಿದೆ ಸಾರ್. ಅಕ್ಕಿಯಂತೂ ಮಾತನಾಡಿಸುವ ಹಾಗೇ ಇಲ್ಲ. ಅದಕ್ಕೆ ಈಗ ನಮ್ಮ ಲ್ಯಾಂಡ್ರಿಯಲ್ಲೂ ಬೆಲೆ ಏರಿಕೆ! ಹಾಗಂದವ ಲ್ಯಾಂಡ್ರಿಯೊಳಗಿನ ಅಗಸ. ಇವತ್ತು ಬಟ್ಟೆ ತೊಳೆಯಲಾರೆ ಅನ್ನಿಸಿದಾಗ, ಬಟ್ಟೆಯಲ್ಲಿ ನನ್ನಿಂದ ತೆಗೆಯಲಾಗದಷ್ಟು ಕಲೆಯಿದೆ ಅಂತಾ ಗೊತ್ತಾದಾಗ ನಾನು ಬಟ್ಟೆ ಲ್ಯಾಂಡ್ರಿಗೆ ಕೊಡೋದು. ಈಗ ಎರಡು ತಿಂಗಳಾಗಿತ್ತು ಲ್ಯಾಂಡ್ರಿ ಕಡೆ ಹೋಗದೆ ಅದ್ಯಾಕೋ ಇವತ್ತು ಹೋದ್ರೆ ರೇಟು ಒಂದು ಪ್ಯಾಂಟಿಗೆ ೨೦ರೂ ಆಗಿದೆ! ಅಲ್ಲಯ್ಯಾ ಇನ್ನೊಂದು ೪೦ರೂ ಇದಕ್ಕೆ ಸೇರಿಸಿದರೆ ಯೂಸ್ ಅಂಡ್ ಥ್ರೋ ಪ್ಯಾಂಟ್ ಬರತ್ತಲ್ಲಾ ಅಂತಾ ಅವನ ಹತ್ರಾ ಜಗಳ ಹೊಡೆದಿದ್ದಕ್ಕೆ ಅಂವ ಲಿಂಬೆ ಹಣ್ಣು, ಅಕ್ಕಿ ಕಥೆ ಹೇಳಿದ!ಒಂದು ಬಟ್ಟೆ ವಾಷ್ ಮಾಡಲು ಆತನಿಗೆ ತಗುಲುವ ಖರ್ಚು ಅಬ್ಬಬ್ಬಾ ಅಂದ್ರೆ ೪ರೂ. ಇನ್ನೂ ಇದು ಬೆಂಗಳೂರು ಇಲ್ಲಿ ಎಲ್ಲವೂ ಕಾಸ್ಟ್ಲಿ ಅಂತಾನೇ ಭಾವಿಸಿದರು ಆರಾಮವಾಗಿ ೬ರೂಗೆ ಅವ ಒಂದು ಬಟ್ಟೆ ಒಗೆದು ಕೊಡಬಹುದು. ಅಷ್ಟು ಕೆಲಸಕ್ಕೆ ಅವ ೨೦ರೂ ಅಂತಾನೇ ಅಂದ್ರೆ? ಅವ ಅಂತಾನೇ ಅಂದ್ರೆ ಅನ್ನೋದು ಸಮಸ್ಯೆಯೆ ಅಲ್ಲ. ಅವ ಹೇಳಿದನ್ನೇ ಕೊಟ್ಟು ನಾವು ಬಟ್ಟೆ ಒಗೆಸಿಕೊಂಡು ಬರ್ತಿವಲ್ವಾ? ಹಾಗಾಗಿಯೇ ಇವತ್ತು ಎಲ್ಲದರ ಬೆಲೆಯೂ ಏರಿಕೆ ಆಗ್ತಾ ಇರೋದು.
ಬೆಲೆ ಏರಿಕೆ ಅನ್ನೋ ಪದಕ್ಕೆ ಒಂದು ಲೆಕ್ಕಾಚಾರವೇ ಇಲ್ಲದಂತಾಗಿದೆ ಇವತ್ತು. ಬೆಂಗಳೂರು ಹೊಟೆಲ್‌ಗಳಲ್ಲಿ ರೈಸ್‌ಸೂಪ್ ಅಂತಾ ಒಂದು ಐಟಂ ಸಿಗತ್ತೆ. ಅದಕ್ಕೆ ಬೆಲೆ ಎಷ್ಟು ಗೊತ್ತಾ? ಬರೊಬ್ಬರಿ ೨೫ರೂ! ಅಂದಹಾಗೆ ಈ ರೈಸ್‌ಸೂಪ್ ಅಂದ್ರೆ ಏನು ಗೊತ್ತಾ? ಅಪ್ಪಟ ಅನ್ನದ ತಿಳಿ! ಅದಕ್ಕೆ ಅದೇನೋ ಕಲರ್ ಪೌಡರು, ಹಚ್ಚಹಸಿರಾದ ಒಂದಿಷ್ಟು ತರಕಾರಿ ಹಾಕಿ ಕೊಡ್ತಾರೆ. ಅಲ್ಲಾರೀ ೧೮ರೂಗೆ ಒಂದು ಕಿಲೋ ಅಕ್ಕಿ ಬರತ್ತೆ ಅಂತಹದ್ದರಲ್ಲಿ ಅನ್ನದ ತಿಳಿಗೆ ೨೫ ಅಂದ್ರೆ..ರೀ ಸ್ವಾಮಿ ಬೇಕಾದ್ರೆ ಕುಡಿರಿ ಬೇಡದೇ ಹೋದ್ರೆ ಎದ್ದು ಹೋಗಿ ಅಂತಾನೇ ಹೋಟೆಲ್‌ನವ. ಈ ಬೆಂಗಳೂರು ಸಾಪ್ಟ್‌ವೇರ್ ಮಂದಿ ಕುರಿಗಳ ತರ ತಲೆಯಾಡಿಸಿ ಅದನ್ನೆ ಕುಡಿದುಕೊಂಡು ಬರುತ್ತವೆ. ಅವು ಏನಾದ್ರು ಕುಡಿದುಕೊಂಡು ಬಂದು ಸಾಯಲಿ ಯಾಕಂದ್ರೆ ಅವು ಕುಡಿಯೋದು ಅವರು ದುಡಿದ ದುಡ್ಡಿನಲ್ಲೇ ಹೊರತು ನಮ್ಮ ಅಪ್ಪನ ಮನೆ ಗಂಟಲ್ಲೇನು ಅಲ್ಲ ಅನ್ನಬಹುದು. ಆದ್ರೆ ೧೦೦ಕ್ಕೆ ೯ ಮಂದಿ ಇರೋ ಇವು ಮಾಡಿಬರೋ ಈ ಕೆಲಸದಿಂದ ಇನ್ನುಳಿದ ೯೧ಮಂದಿ ಮಧ್ಯಮ ವರ್ಗದವರು ಕಷ್ಟ ಅನುಭವಿಸಬೇಕಲ್ಲ ಅನ್ನೋದು ನೋವಿನ ಸಂಗತಿ.
ಹೌದು ಬೆಲೆ ಏರಿಕೆಗೆ ಕಾರಣ ನಾವೇ. ಎಷ್ಟಂದ್ರೂ ಬೆಂಗಳೂರು ಪುರುಸೊತ್ತು ಇಲ್ಲದ ನಾಡು ಅಂತಾ ಫೇಮಸ್ ಆಗಿಬಿಟ್ಟಿದೆ! ಹಾಗಾಗಿ ಅಗಸ ಎಷ್ಟು ಹೇಳಿದರೂ ಕೊಟ್ಟು ಬಟ್ಟೆ ತೊಳೆಸಿಕೊಂಡು ಬರುತ್ತೀವಿ. ಹೋಟೆಲ್‌ನವ ಎಷ್ಟು ಬೆಲೆಗೆ ಏನೂ ಕೊಟ್ಟರೂ ತಿಂದು ಬರುತ್ತೀವಿ. ತಕರಾರು ಮಾಡ್ಲಿಕ್ಕೂ ನಮಗೆ ಪುರುಸೊತ್ತು ಇಲ್ಲ. ನಾವು ಮಾಡಿದರೂ ಅವರು ಕೇಳೋದು ಇಲ್ಲ! ಇನ್ನೂ ನಮ್ಮ ಬಟ್ಟೆ ನಾವು ಒಗೆದುಕೊಂಡರೆ ನಮ್ಮನ್ನು ನಾವು ಡೀಗ್ರೇಡ್ ಮಾಡಿಕೊಂಡತೆ ಅಂತಾ ಭಾವಿಸುವ ಮಂದಿಯೂ ಇದ್ದಾರೆ!
ನಮಗೆನೋ ತಿಂಗಳ ಕೊನೆಗೆ ಗಂಟೆ ಭಾರಿಸಿದ ಹಾಗೇ ಸ್ಯಾಲರಿ ಬರತ್ತೆ. ಆದ್ರೆ ಕೂಲಿಯವರಿಗೆ, ಹಮಾಲಿಗಳಿಗೆ, ಕೆಳವರ್ಗದ ಜನತೆಗೆ ಕೆಲಸ ಸಿಕ್ಕಿದರೆ ಮಾತ್ರ ಕಾಸು. ಆವತ್ತು ದುಡಿದು ಆವತ್ತೆ ಉಣ್ಣೋದು ಅನ್ನುವ ಬದುಕು ಅವರದ್ದು. ಹೀಗೆ ಬೆಲೆ ಏರಿಕೆಯಾದರೆ ಅವರ ಗತಿಯೇನಾಗಬಹುದು. ಅವರದ್ದು ಸಂಬಳ ಹೆಚ್ಚಾಗತ್ತೆ! ಅನ್ನೋದು ನಂತರದ ಮಾತು. ನಮ್ಮ ಜನರ ಮಜ ಅದೇ ಗಾಡಿಯಲ್ಲಿ ತರಕಾರಿಮಾರಲು ಬರುವವನ ಬಳಿ, ಕೂಲಿಗೆ ಕೆಲಸಕ್ಕೆ ಬರುವವನ ಬಳಿ ವ್ಯವಹಾರದಲ್ಲಿ ಚೌಕಾಸಿ ಮಾಡುತ್ತೇವೆ! ಅದೇ ಮಾಲ್‌ಗಳಿಗೋ, ಬಜಾರ್ಗಳಿಗೋ ಹೋದರೆ? ಛೇ ಅಲ್ಲೆಲ್ಲಾ ಚೌಕಾಸಿ ಮಾಡಿದರೆ ನಮ್ಮ ಪ್ರಿಸ್ಟೇಜ್ ಹಾಳಾಗಿಬಿಡತ್ತೆ. ಅದು ಅಲ್ಲದೇ ಅವೆಲ್ಲಾ ಇರೋದು ಚೌಕಾಸಿ ಮಾಡದ ಜನರಿಗಾಗಿಯೇ ಅಂದುಬಿಡುತ್ತೇವೆ! ಆ ಮಾರ್ವಾಡಿ ಅಷ್ಟು ದೊಡ್ಡ ಏಸಿ ಮಾಲ್ ಕಟ್ಟಿದ್ದು ನಮ್ಮಂಥ ಬಕ್ರಾಗಳಿಂದಾನೇ ಅನ್ನೋದು ಕೊನೆಯವರೆಗೂ ನಮಗೆ ಅರ್ಥವೇ ಆಗೋದಿಲ್ಲ!
ಆದ್ರೂ ಈ ಬೆಲೆ ಏರಿಕೆಗೆ ಒಂದು ಕಡಿವಾಣ ಹಾಕೋದು ಇವತ್ತು ಅನಿವಾರ್ಯವಾಗಿದೆ. ಆ ದಿಸೆಯಲ್ಲಿ ನಾವೇನು ಮಾಡಬಹುದು ಅನ್ನೋದನ್ನ ನೀವೆ ಚಿಂತಿಸಿ. ಬಟ್ಟೆಯಲ್ಲಿ ನನ್ನ ಕೈಯಿಂದ ತೆಗೆಯಲಾಗದ ಕಲೆಯಾಗಿತ್ತು ಹಾಗಾಗಿ ನಾನು ಇವತ್ತು ಅರ್ದದಿನ ಹಾಳುಮಾಡಿಕೊಂಡು ೧೦ರೂಗೆ ಪ್ಯಾಂಟ್ ತೊಳೆದುಕೊಡುವವನನ್ನು ಹುಡುಕಿ ನನ್ನ ಬಟ್ಟೆ ವಾಷ್‌ಗೆ ಕೊಟ್ಟು ಬಂದೆ.
Posted in ಚಿಂತನಾ ಚಾವಡಿ | 1 Comment »
April 15, 2008 by aksharavihaara
ಜೋಗಿ ಜಂಗಮರಾದರಂತೆ! ಹಾಗಂತ ಒಂದು ಹಸಿಬಿಸಿ ಸುದ್ದಿ ಹೊರಟಿದ್ದು ಕ್ವೀನ್ಸ್ ರಸ್ತೆಯ ಕನ್ನಡಪ್ರಭ ಆಫಿಸ್‌ನಿಂದ! ಅಲ್ಲಲ್ಲ ಬ್ಲಾಗ್ ಲೋಕದಿಂದ. ಒಂದಿಷ್ಟು ದಿನ ತಮ್ಮ ಬ್ಲಾಗಿಗೆ ಬೀಗ ಹಾಕಿದ್ದ ಜಾನಕಮ್ಮ ಅಲಿಯಾಸ್ ಜೋಗಿ ಇದೀಗ ತಮ್ಮ ಬ್ಲಾಗಿನಬಾಗಿಲನ್ನು ಶಾಶ್ವತವಾಗಿಯೇ ಮುಚ್ಚಿದ್ದಾರೆ ಅನ್ನೋ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆ. ಇಂದಿನ ಬರಹಲೋಕದಲ್ಲಿ ಹೆಚ್ಚು ಕಡಿಮೆ ಅಗ್ರಪಂಕ್ತಿಯಲ್ಲಿರುವ ಜೋಗಿ ಬರಹದ ಬಗ್ಗೆ ಹೊಸತಾಗಿ ಯಾರಿಗೂ ಹೇಳಬೇಕಿಲ್ಲ. ನಿಲುವು ಎಡದಂತೆ ಕಂಡರೂ ವಾಸ್ತವವನ್ನು ಒಪ್ಪಿಕೊಳ್ಳುವುದರಿಂದಲೇ ನನ್ನಂತಹ ಯುವಕನಿಗೆ ಜೋಗಿ ತುಂಬಾ ಇಷ್ಟವಾಗುತ್ತಾರೆ. ಕನ್ನಡ ಪ್ರಭದಲ್ಲಿ ಅಡ್ಡನಾಮ, ಉದ್ದನಾಮಗಳೊಂದಿಗೆ ಎಷ್ಟೇ ಬರೆದರೂ ಅದು ಅವರ ಬ್ಲಾಗ್‌ಬರಹದಷ್ಟು ರುಚಿ ಕೊಡುವುದಿಲ್ಲ.
ಜೋಗಿ ಅದ್ಯಾಕೆ ಮುನಿಸಿಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಆದ್ರೂ ಜಂಗಮರಾದಂತಿಲ್ಲ. ಎನಿವೇ ಜೋಗಿ ಬೇಗ ಬ್ಲಾಗ್‌ಲೋಕಕ್ಕೆ ಮರಳಲಿ ಅನ್ನೋದೆ ನನ್ನ ಕೋರಿಕೆ.
Posted in ಚಿಂತನಾ ಚಾವಡಿ | No Comments »
April 11, 2008 by aksharavihaara
ಹಾಯ್ ಅವಾಂತರೇಶ,
ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ ಒಡಲಲ್ಲಿ ನೀರೆ ಇರಲಿಲ್ಲ. ಆದ್ರೂ ನಾನು ತುಂಗೆಗೆ ಹಾರಿಯೇ ಸಾಯೋದು ಅಂತಾ ನಿನ್ನ ಪತ್ರ ಓದಿದ ಮರುಕ್ಷಣವೇ ನಿರ್ಧರಿಸಿ ಆಗಿತ್ತು. ಹಾಗಾಗಿ ನೀರಿಲ್ಲದ ನದಿಗೆ ಕಣ್ಣು ಮುಚ್ಚಿ ಹಾರಿಯೇ ಬಿಟ್ಟೆ ಮಾರಾಯ!
ಮತ್ತೆ ನೀನಿನ್ನು ಸಾಯಲಿಲ್ಲವಾ ಅಂತಾ ನನ್ನನ್ನು ಶಪಿಸುತ್ತಾ ನಿನ್ನಷ್ಟಕ್ಕೆ ನೀನೆ ಗೊಣಗಿಕೊಳ್ಳುತ್ತಿರುತ್ತೀಯಾ ಅಂತಾ ನಂಗೆ ಗೊತ್ತು ಕಣೋ ಚಿನ್ನುಮರಿ! ಆಮೇಲಿನ ಕಥೆ ಹೇಳ್ತಿನಿ ಕೇಳು. ನಾನು ಕಣ್ಣುಮುಚ್ಚಿ ತುಂಗೆಗೆ ಹಾರಿದ್ನಾ, ಅಯ್ಯೋ ಎಂತ ಮರುಳಿ ನಾನು ಯಕಶ್ಚಿತ ಹುಡುಗನೊಬ್ಬ ಬೈದ ಅಂತಾ ನನ್ನ ಬದುಕನ್ನ ಬಲಿಕೊಡ್ತಾ ಇದೀನಲ್ಲಾ ಅಂತಾ ಅನ್ನಿಸತೊಡಗಿತು ನಂಗೆ. ಆದ್ರೆ ಪ್ರಯೋಜನ ಏನು ಹೇಳು? ಅಷ್ಟೊತ್ತಿಗಾಗಲೇ ನಾನು ನದಿಗೆ ಜಿಗಿದು ಆಗಿತು. ನನ್ನ ಪುಣ್ಯವೋ ನಿನ್ನ ಪಾಪವೋ ಗೊತ್ತಿಲ್ಲ ತುಂಗೆ ನನ್ನ ಜೀವವನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ! ನದಿಗೆ ಹಾರಿದ್ದು ಅನ್ನೋದು ನಂಗೊಂದುಸಾರಿ ಈಜುಕೊಳಕ್ಕೆ ಹಾರಿದ ಹಾಗೆ ಆಯಿತು ಅಷ್ಟೆ! ಕೈಕಾಲೆಲ್ಲಾ ಕಲ್ಲಿಗೆ ತಾಗಿ ಕೆತ್ತಿಹೊಯಿತು. ರಕ್ತ ಒತ್ತರಿಸಿ ಬಂತು. ಅಷ್ಟೊತ್ತಿಗೆ ನಮ್ಮಪ್ಪ ಜೋಯ್ಸ್‌ಂಗೆ ಯಾರೋ ನಿಮ್ಮ ಮಗಳು ತುಂಗೆ ಹಾರಿದಾಳೆ ಅಂತಾ ಸುದ್ದಿ ಕೊಟ್ಟರಂತೆ!
ಜೋಯ್ಸ್ ಓಡೋಡಿ ಬಂದವನೆ ಏ ಪುಣ್ಯಾತ್‌ಗಿತ್ತಿ ನೀನಿನ್ನು ಸಾಯಲಿಲ್ಲವೇನೆ ಮಾರಯಿತಿ ಅಂದ! ದನ ಎಳೆದುಕೊಂಡು ಹೋಗೋ ಹಾಗೆ ನನ್ನನ್ನು ದರದರನೆ ಎಳೆದುಕೊಂಡು ಹೋದ ಮನೆವರೆಗೂ. ಇವೆಲ್ಲಾ ಆಗಿದ್ದು ನಿನ್ನಿಂದಲೆ ತಲೆಹರಟೆ.
ಆಮೇಲೆ ಅಮ್ಮ ಅದೇನೇನೋ ಸೊಪ್ಪು ಸದೆಯ ರಸವನ್ನೆಲ್ಲಾ ಹಿಂಡಿ ನನ್ನ ಗಾಯದ ಮೇಲೆ ಸುರಿದಳು ವಟವಟ ಅಂತಾ ನನ್ನ ಬೈಯ್ಯುತ್ತಾ! ನಂಗೆ ಆವಾಗ ಎಷ್ಟು ಉರಿಯಾಯಿತು ಗೊತ್ತಾ? ನಾನು ಆವಾಗ ನಿನಗೆ ಹಾಕಿದ ಶಾಪ ಇದೆಯಲ್ವಾ? ಏಳು ಜನ್ಮ ಕಳೆದರೂ ಹೋಗೋದಿಲ್ಲ ಬಿಡು. ಅಲ್ವೆ ಸಾಯೋವಂತದ್ದು ನಿನಗೆ ಏನಾಗಿತ್ತೆ? ನಾ ಆವತ್ತೆ ಅವ್ರ ಹತ್ರಾ ಬಡಿದುಕೊಂಡೆ ಹೆಣ್ಣುಮಗಳನ್ನು ಕಾಲೇಜಿಗೆ ಕಳುಹಿಸಬೇಡಿ ವಯಸ್ಸಿಗೆ ಬಂದಿದಾಳೆ ಬೇಗ ಮದ್ವೆ ಮಾಡಿಬಿಡಿ ಅಂತಾ. ಈಗ ನೋಡು ಅವಾಂತರಾನ. ನೀನೆನಾದ್ರೂ ಸತ್ತಿದ್ದರೆ ನಮ್ಮ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು ಅಂತಾ ಶುರುಹಚ್ಚಿಕೊಂಡರು ನೋಡು ಪ್ರವಚನನಾ……ಎಲ್ಲಾ ಆಗಿದ್ದು ನಿನ್ನಿಂದಲೆ ಮೂರುಕಾಸಿನವನೇ….
ಇಲ್ಲ ಅಮ್ಮ ನಾನು ಸಾಯಬೇಕು ಅಂತಾ ಹೋಗಿದ್ದಲ್ಲಾ, ಈಜು ಕಲಿಯಬೇಕು ಅಂತಾ ಆಸೆಯಾಯಿತು ನೀರಿಲದ ತುಂಗೆ ನೋಡಿ ಅದ್ಕೆ ಹಾರಿದೆ….ಅಂತೆಲ್ಲಾ ಕಥೆ ಹೇಳಿ ತೆರೆದಿದ್ದ ಅಮ್ಮನ ಬಾಯಿ ಮುಚ್ಚಿಸುವಾಗ ಸಾಕುಸಾಕಾಗಿ ಹೋಯಿತು ಮಾರಾಯ. ಅಮ್ಮನ ಬಾಯಿ ಮುಚ್ಚಿಸೋದಕ್ಕಿಂತ ನಿನ್ನ ಜೊತೆ ಜಗಳವಾಡೋದೆ ಎಷ್ಟೋ ಲೇಸು ಕಣೋ. ಅಮ್ಮನದ್ದು ನಿಂತಿತು ಅನ್ನೋವಾಗ ಅಪ್ಪನದ್ದೂ ಶುರುವಾಯಿತು ಮಗಳು ಕಲಿತು ಜಾಣೆಯಾಗಲೀ ಅಂತಾ ಕಾಲೇಜಿಗೆ ಕಳುಹಿಸಿದರೆ ಇವಳು ಈಜೋದು, ಕೆದುಕೋದು ಅಂತಾ ಬರೀ ಬೇಡದೇ ಇರೋದನ್ನೇ ಕಲಿತು ಬಂದಿದಾಳೆ. ಈ ವರ್ಷ ಶ್ರಾವಣಕ್ಕೆ ಹೇಗಾದ್ರೂ ಮಾಡಿ ಇವಳನ್ನ ದಾಟಿಸಿಬಿಡಬೇಕು……ಗೊತ್ತಲ್ಲ ನಿಂಗೆ ಜೋಯ್ಸರ ಪುರಾಣ ಹೇಗಿರತ್ತೆ ಅಂತಾ.
ನಿನ್ನಜ್ಜಿ ಇನ್ನೊದ್ಸಾರಿ ನಮ್ಮ ಮನೆ ಕಡೆ ಕಾಲಿಡು ನೀನು ಇವತ್ತಿಗೆ ನನ್ನ ನಿನ್ನ ಸಂಬಂಧ ಕಳೆಯಿತು ಅಂತಾ ನಿಂಗೆ ನೇರವಾಗಿ ಹೇಳಿ ಬಿಡಬೇಕು ಅನ್ನಿಸ್ತು ಆ ಘಟನೆಯಾದ ಬಳಿಕ. ಆದ್ರೂ ಯಾಕೋ ನಿನಗೆ ಹಾಗೆ ಹೇಳಲು ಮನಸೇ ಬರ್ತಾ ಇಲ್ಲ ಮಾರಾಯ. ಎಷ್ಟಂದ್ರೂ ನೀನು ನನ್ನವ ಅಂತಾ ಅನ್ನಿಸ್ತಾ ಇದೆ!
ಇಂತಿ
ಪುಟ್ಟಿ
Posted in ಕ್ರಿಯೇಟಿವ್ ಪೇಜ್ | 1 Comment »
April 8, 2008 by aksharavihaara
ಗೆಳೆಯ ಶ್ರೀಕಾಂತ್ ಮೊನ್ನೆ ಸಿಕ್ಕಿದ್ದ. ಅವ ಇಲ್ಲೆ ಬೆಂಗಳೂರಿನಲ್ಲಿ ಪುರೋಹಿತನಂತೆ. ಇವತ್ತು ಅಪ್ಪಾ ಅಮ್ಮನಿಗೆ ಮೂರು ಹೊತ್ತು ಊಟ ಹಾಕ್ತಾ ಇದೀನಿ ಅನ್ನೋದೆ ನನ್ನ ಸಂತೋಷ ಮಾರಾಯ ಅಂತಿದ್ದ. ನಾನು ಹೈಸ್ಕೂಲ್ ಓದ್ತಾ ಇರೋವಾಗ ಇಕ್ಕೇರಿ ಪ್ರೌಡಶಾಲೆಯಲ್ಲಿ ನನ್ನ ಜೊತೆ ಓದಿದವನು ಆತ. ಅವನ ಕಷ್ಟ ನನಗೆ ಚೆನ್ನಾಗಿ ಗೊತ್ತು. ಅವ ಜಾತಿಯಿಂದ ಹವ್ಯಕ. ಅವನ ಅಪ್ಪಾ ಮೇಸ್ತ್ರಿ(ಗಾರೆ) ಕೆಲಸ ಮಾಡುತ್ತಿದ್ದರು. ಆವತ್ತು ಮಲೆನಾಡಿನಲ್ಲಿ ಹಳ್ಳಿಗಳಲ್ಲಿ ಗಾರೆ ಕೆಲಸ ಸಿಗುತ್ತಿದ್ದದ್ದು ಅಷ್ಟರಲ್ಲೇ ಇತ್ತು. ಸಿಕ್ಕರೂ ಕೈಗೆ ಬರುತ್ತಿದ್ದ ಸಂಬಳವೂ ಹಾಗೇ ಇತ್ತು. ಹಾಗಾಗಿ ಒಂದು ಹೊತ್ತು ಊಟಕ್ಕಿದ್ದರೆ ಮೂರು ಹೊತ್ತು ಊಟಕ್ಕಿಲ್ಲದ ಮನೆ ಗೆಳೆಯ ಶ್ರೀಕಾಂತ್‌ನದ್ದು. ಅದೂ ಅಲ್ಲದೇ ಅವರಪ್ಪನಿಗೆ ದುಡಿಯಲು ಆಗುತ್ತಿರಲಿಲ್ಲ. ಆದ್ರೂ ಹೊಟ್ಟೆಪಾಡಿಗಾಗಿ ದುಡಿಮೆ ಅನ್ನೋದು ಅವರಿಗೆ ಅನಿವಾರ್ಯವಾಗಿತ್ತು. ಅವನ್ನ ಕಂಡಗಲೆಲ್ಲಾ ನಂಗೆ ನೋವಾಗುತ್ತಿತ್ತು. ಅವನಿಗೆ ಸಹಾಯ ಮಾಡೋಣ ಅಂದ್ರೆ ನನ್ನಲ್ಲಿನ ಶ್ರ್‍ಈಮಂತಿಕೆಯೂ ಅಷ್ಟರಲ್ಲೇ ಇತ್ತು. ಅವ ಎಸ್ಸೆಸ್ಸೆಲ್ಸಿ ಮುಗಿಸಿ ಮನೆ ಬಿಟ್ಟ ಅದೇಗೋ ಮಂತ್ರ ಕಲಿತ ಬೆಂಗಳೂರಿಗೆ ಬಂದು ಪುರೋಹಿತ್ಯ ಆರಂಭಿಸಿದ. ಅಂತಹ ಗೆಳೆಯ ಅಪ್ಪಾ ಅಮ್ಮನಿಗೆ ಮೂರುಹೊತ್ತಿನ ಊಟ ಹಾಕುವಷ್ಟು ಶ್ರ್‍ಈಮಂತನಾಗಿದ್ದೇನೆ ಅಂದಾಗ ನನಗೆ ನಿಜಕ್ಕೂ ಸಂತಸವಾಯಿತು. ಹೌದು ಬೆಂಗಳೂರಿನ ಪುರೋಹಿತರನ್ನು ಕಂಡಾಗ ಮೈ ಉರಿಯತ್ತೆ ಆದ್ರೆ ಶ್ರೀಕಾಂತ್‌ನಂತಹ ಗೆಳೆಯರನ್ನು ಕಂಡಾಗ ಮಲೆನಾಡಿನ ಎಷ್ಟೋ ಜನರಿಗೆ ಅನ್ನಕೊಟ್ಟ ವೃತ್ತಿ ಅದು ಅಂತಾ ಸಂತಸವಾಗತ್ತೆ.
ಯಲ್ಲಾಪುರ, ಉತ್ತರಕನ್ನಡದ ಬಡತನ ನೋಡಿದರೆ ಸಾಗರದ ನಾವು ಎಷ್ಟೋ ವಾಸಿ ಅನ್ನಿಸತ್ತೆ. ಇವತ್ತಿಗೂ ತುತ್ತು ಕೂಳಿಗೆ ಗತಿಯಿಲ್ಲದ ಮಂದಿ ಆ ಭಾಗದಲ್ಲಿದ್ದಾರ್‍ಎ. ಜಾತಿಯಲ್ಲಿ ಬ್ರಾಹ್ಮಣ ಅನ್ನಿಸಿಕೊಂಡರೆ ಮುಗಿತು. ಅವ ಸಮಾಜದ ಲೆಕ್ಕದಲ್ಲಿ ಶ್ರೀಮಂತನೆ! ಒಂದು ಕಾಲದಲ್ಲಿ ಇತರೆ ವರ್ಗದವರ ಪಾಡು ಹೇಗಾಗಿತ್ತೋ ಅದೇ ಪಾಡು ಇವತ್ತು ಬ್ರಾಹ್ಮಣರದ್ದಾಗಿದೆ. ಬ್ರಾಹ್ಮಣರು ಅಂದ್ರೆ ಅದೆಂತದೋ ಮೂದಲಿಕೆ. ಶತಶತಮಾನಗಳ ಕಾಲ ಬ್ರಾಹ್ಮಣರು ಇತರೆ ಜನಾಂಗವನ್ನೂ ತುಳಿದರೂ ಅದಕ್ಕೆ ಪ್ರತಿಫಲ ಇವತ್ತು ಅನುಭವಿಸುತ್ತಿದ್ದಾರೆ ಅಂತಾ ಹೇಳೋದು ತುಂಬಾ ಸುಲಭ. ಯಾಕಂದರೆ ಹಾಗೇ ಹೇಳುವವರು ದಲಿತರ ನೋವನ್ನು ಕಂಡಿರುವುದಿಲ್ಲ. ಬಡ ಬ್ರಾಹ್ಮಣರ ನೋವನ್ನು ಕಂಡಿರುವುದಿಲ್ಲ! ಆ ಬಡತನದ ನೋವನ್ನು ತೀರಿಸಿಕೊಳ್ಳಲೆಂದೇ ಬ್ರಾಹ್ಮಣರು ತಮ್ಮ ಮೂಲ ಕಸುಬಾದ ಪುರೋಹಿತ್ಯವನ್ನು ಅರೆಸಿಕೊಂಡು ಬೆಂಗಳೂರಿಗೆ ಬರುತ್ತಿರುವುದು. ಹಳ್ಳಿಗಳ್ಳಲ್ಲಿ ಪುರೋಹಿತರಿಗೆ ಬೆಲೆಯಿಲ್ಲ. ಬೆಲೆಯಿದ್ದರೂ ಸಂಪಾದನೆ ತೀರಾ ಕಡಿಮೆ. ಓದಿ ದಡ ಸೇರಲು ಓದಬೇಕಾದ ಕಾಲದಲ್ಲಿ ಹಣವಿಲ್ಲ. ಪುಕ್ಕಟ್ಟೆ ಊಟ ಮಾಡಿಕೊಂಡು ಮಠದಗಳಲ್ಲಿ ಇದ್ದುಕೊಂಡು ಕಲಿಯಬಹುದಾದ ವಿದ್ಯೆಯೆಂದರೆ ಬ್ರಾಹ್ಮಣರ ಪಾಲಿಗೆ ಪೌರೋಹಿತ್ಯ ಹಾಗಾಗಿ ಬಡತನವಿದ್ದವರೆಲ್ಲಾ ಅದರತ್ತ ಲಗ್ಗೆ ಇಟ್ಟರು. ಒಳ್ಳೆ ಸಂಪಾದನೆ ಮಾಡಲೆಂದು ಬೆಂಗಳೂರಿಗೆ ಬಂದು ದುಡಿಮೆ ಶುರು ಹಚ್ಚಿಕೊಂಡರು ಅದರಲ್ಲಿ ತಪ್ಪೆನಿದೆ? ಪುರೋಹಿತ ದುಡ್ಡು ಮಾಡೋದು ವೇದಾಂತಿಗಳ, ಬರಗಾರರ ಕಣ್ಣು ಕುಕ್ಕಿಸತ್ತೆ. ಸಾಹಿತಿಗಳ ಬಾಯಿಗೆ ಆಹಾರವಾಗತ್ತೆ ಆದ್ರೆ ಇತರರು ಎಂತೆಂತಹದೋ ಹಾದರ ಮಾಡಿ ಹಣ ಸಂಪಾದಿಸುತ್ತಿದ್ದಾರಲ್ಲಾ? ಕೆಲ ಸಾಹಿತಿಗಳು ರಾಜಕಾರಣಿಗಳ ಸುತ್ತಾ ಸುತ್ತಾಡುತ್ತಿದ್ದಾರಲ್ಲಾ ಅವೆಲ್ಲಾ ತಪ್ಪಲ್ವಾ ಅಂದರೆ ನಮ್ಮಲ್ಲಿ ಉತ್ತರವಿಲ್ಲ.
ಹೌದು ಮಲೆನಾಡಿನಲ್ಲಿ ದಲಿತರ ಉದ್ದಾರ ಮಾಡಲೆಂದೇ ನಕ್ಸಲಿಸಂ ಹುಟ್ಟಿಕೊಂಡಿದೆ! ಇವತ್ತು ಶೃಂಗೇರಿ ಸುತ್ತಾ ಮುತ್ತಲಿನ ದಲಿತರೆಲ್ಲಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಕ್ಸಲೀಯರೇ ಕಾರಣ(ಊಟ ಮಾಡುತ್ತಿದ್ದರೆ ಮಾತ್ರ!)ಊರಿಗೊಂದು ಬಾವಿಯಾಗಿದೆ, ರಸ್ತೆಯಾಗಿದೆ, ಶಾಲೆಯಾಗಿದೆ ಅಂದರೆ ಅದೆಲ್ಲಾ ನಕ್ಸಲೀಯರ ಶ್ರಮದ ಫಲ! ಇನ್ನೂ ದಲಿತ ಸಂಘರ್ಷ ಸಮಿತಿ, ದಲಿತ್ತೋದ್ದಾರಕ ಸಮಿತಿ…..ಹೀಗೆ ಹತ್ತಾರು ಸಂಸ್ಥೆಗಳು ದಲಿತರ ಒಳಿತಿಗಾಗಿ ದನಿ ಎತ್ತುತ್ತಿವೆ. ಅದೆಲ್ಲಕ್ಕಿಂತಾ ಮುಖ್ಯವಾಗಿ ಅನೇಕ ಸಾಹಿತಿಗಳು ದಲಿತರ ಪರ ಅನುಕಂಪದ ಮಾತಾಡುತ್ತಾ, ಕೃತಿ ರಚಿಸುತ್ತಾ ತಾವು ಗಳಿಸಿದ ಹಣದಲ್ಲಿ ಅವರಿಗೆ ಅರ್ಧ ನೀಡುತ್ತಾ ಇದ್ದಾರೆ! ಆದರೆ ಮಲೆನಾಡಿನ ಬಡ ಬ್ರಾಹ್ಮಣರ ಪರವಾಗಿ ಯಾರಿದ್ದಾರೆ. ದಲಿತರು ಬ್ರಾಹ್ಮಣರನ್ನು ನಿಂದಿಸುವುದಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣರೇ ಬ್ರಾಹ್ಮಣರನ್ನು ನಿಂದಿಸುತ್ತಾರೆ ಅದೆಂತದೋ ಒಂತರಹ ಜ್ಞಾನೋದಯವಾಗಿ!(ಬ್ರಾಹ್ಮಣರ ವಿರೋದಿ ಅಲೆ ತಪ್ಪು ಅಂತಾ ನಾನು ಇಲ್ಲಿ ಹೇಳುತ್ತಿಲ್ಲ. ದಲಿತ ಉದ್ದಾರ ಅನ್ನೋದು ಭಾಷಣಕ್ಕೆ ಮಾತ್ರ ಸೀಮಿತ. ಇವತ್ತಿಗೂ ಮಲೆನಾಡು ಭಾಗದಲ್ಲಿ ದಲಿತರು ಕಷ್ಟದ ಜೀವನ ನಡೆಸುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಅವರ ಮೇಲೆ ಅನುಕಂಪ ತೋರುವ ನಾಟಕ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವವರು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ. ಆ ಬೇಸರದ ನುಡಿಗಳು ಮೇಲಿನವು. ಬಡವನಾದವ ಬ್ರಾಹ್ಮಣನಾದರೂ ಅಷ್ಟೇ, ದಲಿತನಾದರೂ ಅಷ್ಟೇ ಅವನ ಪಾಲಿಗೆ ಬೆನ್ನೆಲ್ಲಾ ಹೊಟ್ಟೆಯೇ!)
ಹೀಗೆಲ್ಲಾ ಅವಲೋಕಿಸಿದ ಪುರೋಹಿತರು ಮಾಡುತ್ತಿರುವುದು ಸರಿ ಅನ್ನಿಸತ್ತಾದರೂ ಯಾರ್ಯಾರೋ ಎಂತೆಹದ್ದೋ ಹಾದರ ಮಾಡುತ್ತಾರೆ ಅಂತಾ ದೇವರ ಹೆಸರಿನಲ್ಲು ಹಣಸುಲಿಗೆ ಮಾಡುವುದು ಸರಿಯಲ್ಲ. ದೇವರು ಭಾವದ ಒಂದು ಪ್ರತೀಕ ಹೊರತು ಮಾರಾಟದ ಸರಕಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ ಇನ್ನೆನೂ ಮಾಡೋದು ಅದು ಬ್ರಾಹ್ಮಣನಾಗಿ ಅಂದರೆ ನನ್ನ ಮಟ್ಟಿಗಂತೂ ಉತ್ತರವಿಲ್ಲ. ವೈಚಾರಿಕವಾಗಿ ದೇವರನ್ನು ಮಾರಾಟದ ಸರಕನ್ನಾಗಿಸೋದು ತಪ್ಪು. ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ ಹೊರತು ಶಂಕರ ಭವತಿ ಶಿಲಾ ಆಗಬಾರದು ಅಲ್ವಾ? ಆದ್ರೆ ದೇವರು ಎಂಬುದು ಹಣ ಮಾಡೋ ಸರಕಾದರೆ ಶಂಕರನೂ ಶಿಲೆ ಅನ್ನಿಸಿಬಿಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಇಂತಹದೊಂದು ಸಮಸ್ಯೆ ತಪ್ಪಿಸಲು ಏನು ಮಾಡಬಹುದು ಅನ್ನೋದನ್ನಾ ನೀವೆ ತಿಳಿಸಿ.
Posted in ಚಿಂತನಾ ಚಾವಡಿ | No Comments »
April 3, 2008 by aksharavihaara

ಹಾಯ್ ಪುಟ್ಟಿ
“ಏನೇ ನಮ್ಮ ಅಪ್ಪಾ, ಅಮ್ಮನ್ನೇ ಗಯ್ಯಾಳಿ ಮನೆತನದವರು ಅಂತೀಯಾ? ನಿಂಗೆ ಕೊಬ್ಬು ತುಂಬಾ ಹೆಚ್ಚಾಗಿದೆ. ನೀನು ಏನು ಹೇಳಿದರೂ ನಾನು ತಿರುಗಿ ಮಾತಾಡಲ್ಲ ಅನ್ನೋ ಭಾವ ನಿನ್ನಲ್ಲಿ ಮೂಡಿದೆ. ನೋಡು ಇದು ನಿಂಗೆ ಲಾಸ್ಟ್ ವಾರ್ನಿಂಗ್. ಇನ್ನೊಂದು ಸಲ ಈ ರೀತಿ ಕಿರಿಕ್ ಮಾಡಿದ್ಯಾ ಅವಳು ಸರಿಯಿಲ್ಲ ಅಂತಾ ನಿಮ್ಮೂರಿಗೆಲ್ಲಾ ಹಬ್ಬಿಸುತ್ತೇನೆ. ನನ್ನಂತಹ ಪಾಪದ ಹುಡುಗನ ಜೊತೆಯೇ ಜಗಳ ಕಾಯೋ ಜಗಳಗಂಟಿ ಅಂತಾ ನಿಮ್ಮುರಿನ ಬಾಯಿಬಡುಕ ಹೆಂಗಸರಿದ್ದಾರಲ್ಲ, ಅದೇ ಸೀತಮ್ಮ, ಮೀನಾಕ್ಷಮ್ಮ…ಅವರ ಹತ್ರಾ ಹೇಳ್ತೀನಿ. ಆಮೇಲೆ ನಿನ್ನ ಮದ್ವೆಯಾಗಕೆ ಯಾರು ಬರಲ್ಲ. ಆಮೇಲೆ ಸಾಯೋವರೆಗೂ ನಿಮ್ಮಪ್ಪನ ಮನೇಲಿ ಮುಸುರೆ ತಿಕ್ಕಿಕೊಂಡು ಬಿದ್ದಿರಬೇಕು ನೀನು. ಆತರಹ ಮಾಡ್ತೀನಿ ನೋಡು” ಅಂತೆಲ್ಲಾ ಚೆನ್ನಾಗಿ ಬೈಯಬೇಕು ಅನ್ನೋವಷ್ಟು ಕೋಪ ಬಂದಿತ್ತು ನಿನ್ನ ಮೇಲೆ ನೀನು ಬರೆದ ಕಾಗದ ತೆರೆದು ನೋಡಿದಾಗ.
ತಕ್ಷಣ ನಿಮ್ಮಪ್ಪ ನಿಂಗೆ ಮೂಲಾನಕ್ಷತ್ರದ ಅನಿಷ್ಟ ಅಂತಾ ಬೈಯ್ಯುತ್ತಿದ್ದದ್ದು ನೆನಪಾಯಿತು. ಹಾಗಾಗಿ ನಾನು ಬೈಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸ್‌ಲ್ ಮಾಡಿಬಿಟ್ಟೆ. ನಾನು ಬೈಯ್ಯೋದು, ಅದಕ್ಕೆ ನೀನು ಬೇಸರವಾಗೋದು ಕೊನೆಗೆ ನೀನು ತುಂಗಾ ನದಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋದು…ತುಂಗಾ ನದಿಗೆ ಹೋಗಿ ಹಾರ್ತಿಯಾ ಅಂದ್ರೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಖಂಡಿತವಾಗಿಯೂ ಬೈಯ್ಯುತ್ತಿದೆ. ಆದ್ರೆ ನಂಗೆ ಗೊತ್ತಿಲ್ವಾ ನೀನೆಷ್ಟು ಸೋಮಾರಿ ಅಂತಾ! ಸಾಯಲಿಕ್ಕೆ ತುಂಗಾ ನದಿವರೆಗೆ ನಡೆದುಕೊಂಡು ಹೋಗಬೇಕಾ? ನಮ್ಮ ಮನೆ ಹಿತ್ತಲಿನಲ್ಲಿರೋ ಬಾವಿ ಹಾರಿದರೆ ಆಗಲ್ವಾ ಅನ್ನೋ ಜಾತಿಯವಳು ನೀನು. ನೀನು ಬಾವಿಹಾರಿ ಸತ್ತರೆ ನಂಗೆ ಪ್ರಾಬ್ಲಂ! ಅಯ್ಯೋ ನಾನು ಜೀವನದಲ್ಲಿ ಉಳಿಸಿದ ಹಣಯೆಲ್ಲಾ ಖರ್ಚುಮಾಡಿ ಈ ಭಾವಿ ತೋಡಿಸಿದ್ದೆ ಈ ಮುಂಡೆಗೆ ಸಾಯಲಿಕ್ಕೆ ಈ ಭಾವಿನೇ ಬೇಕಿತ್ತಾ? ಅಂತಾ ನಿಮ್ಮಪ್ಪ ಜೋಯ್ಸ್ ಖಂಡಿತಾ ಕೂಗಾಡುತ್ತಾನೆ. ನಂಗೆ ಮುಸುರೆ ತಿಕ್ಕಿಕೊಡುತ್ತಿದ್ದವಳು, ನೀರೆತ್ತಿಕೊಡುತ್ತಿದ್ದವಳು ಸತ್ತೇ ಹೋದ್ಲಲ್ಲಾ..ನನ್ನ ಬಲಗೈ ಮುರಿದೇ ಹೋಯಿತಲ್ಲಾ ಅಂತಾ ನಿಮ್ಮಮ್ಮ ಕಿರುಚಾಡುತ್ತಾಳೆ. ನಿನ್ನ ಸಾವಿಗೆ ನಾನು ಬರೆದ ಪತ್ರವೇ ಕಾರಣ ಅಂತಾ ಊರವರಿಗೆಲ್ಲಾ ಹೇಳುತ್ತಾಳೆ. ಆಮೇಲೆ ಪೋಲಿಸ್‌ನವರು ಬಂದು ಸುಮ್ನೆ ನಂಗೆ ಕಿರಿಕಿರಿ ಮಾಡ್ತಾರೆ. ನೀನು ಬಾವಿ ಹಾರಿ ಸಾಯೋದು ಎಷ್ಟೆಲ್ಲಾ ನಷ್ಟ ಉಂಟುಮಾಡತ್ತೆ ಅಂತಾ ಆಲೋಚಿಸಿದ ಮೇಲೆ ನಾನು ಬೈಯ್ಯಬೇಕು ಅಂದುಕೊಂಡಿದ್ದನ್ನೆಲ್ಲಾ ಕ್ಯಾನ್ಸಲ್ ಮಾಡಿಬಿಟ್ಟೆ. ಈವಾಗ್ಲೂ ಕಾಲಮಿಂಚಿಲ್ಲ. ನೀನು ಬೈದರೆ ನಾನು ತುಂಗಾ ನದಿ ಹಾರಿಯೇ ಸಾಯುತ್ತೀನಿ ಅಂತಾ ಭರವಸೆ ಕೊಡು. ಖಂಡಿತಾ ನಾನು ನಿನಗೆ ಈ ಪತ್ರದ ಮೊದಲನೆ ಸಾಲುಗಳಲ್ಲಿ ಹೇಳಿದ ದಾಟಿಯಲ್ಲೇ ಬೈಯ್ಯುತ್ತೀನಿ!
ಮತ್ತೆ ಏನು ಕಾರುಬಾರು ಊರಲ್ಲಿ. ನಮ್ಮೂರಲ್ಲಿ ಕಾರು ಇಲ್ಲ, ಬಾರು ಇಲ್ಲ ಅಂತಿಯಾ ನೀನು ಅಂತಾ ನಂಗೆ ಗೊತ್ತು ಆದ್ರೂ ಸುಮ್ನೆ ಕೇಳಿದೆ. ಹೆದರಬೇಡ ನಾನು ಬಂದ ಮೇಲೆ ನಿಮ್ಮೂರಿಗೆ ಕಾರು ಅಥವಾ ಬಾರು ಎರಡರ ಒಳಗೆ ಯಾವುದಾದರೂ ಒಂದು ಎಂಟ್ರಿಕೊಡತ್ತೆ! ಬೆಂಗಳೂರೆಂಬ ಈ ಸಿಮೆಂಟು ಜಂಗಲ್ಲಿನ ಲೈಪು ತುಂಬಾ ಬೋರ್ ಆಗ್ತಾ ಇದೆ ಕಣೇ. ಜಗಳ ಆಡೋಣ ಅಂದ್ರು ಯಾರು ಸಿಗಲ್ಲ. ಅದೇ ಕೆಲಸವಿಲ್ಲದ ಹಾಳು ಆಫೀಸು, ಸೊಳ್ಳೆ ತುಂಬಿರುವ ರೂಂಮು ಇದೆ ನನ್ನ ಸದ್ಯದ ಪ್ರಪಂಚವಾಗಿಬಿಟ್ಟಿದೆ. ಆದ್ರೂ ದುಡಿಲೇಬೇಕು. ನನಗೋಸ್ಕರ ಅಲ್ಲದಿದ್ದರೂ ನಿನ್ನ ಕಟ್ಟಿಕೊಳ್ಳುತ್ತೀನಲ್ಲಾ ಅದಕ್ಕಾದರೂ ದುಡಿಯಬೇಕು! ಹೋಗ್ಲಿಬಿಡು ನನ್ನ ಕಷ್ಟ ನಿನ್ನ ಹತ್ತಿರ ಹೇಳಿ ನಿನಗ್ಯಾಕೆ ಸುಮ್ನೆ ಖುಷಿಯಾಗೋ ಹಾಗೆ ಮಾಡಲಿ. ಮತ್ತೆ ಸಮಾಚಾರ.
ಮಳೆ ಸಖತ್ತಾಗಿ ಹೊಯ್ಯುತ್ತಾ ಇದೆ ಅಂದೆ ಅಲ್ವಾ? ಛೇ ನಿಮ್ಮೂರಿನ ಮಳೆ ನೆನೆಸಿಕೊಂಡರೆ, ಮಳೆಯಲ್ಲಿ ನಾನು ನೀನು ನೆನೆಯೋದನ್ನಾ ನೆನಪಿಸಿಕೊಂಡರೆ ನಂಗೆ ತುಂಬಾ ಫೀಲ್ ಆಗತ್ತೆ ಕಣೇ. ಅಂದಹಾಗೆ ಬೆಂಗಳೂರಿನ ಮಳೆ ಕಥೆಯನ್ನಿನ್ನು ನಿಂಗೆ ಹೇಳಿಲ್ಲಾ ಅಲ್ವಾ? ಮುಂದಿನ ಪತ್ರದಲ್ಲಿ ಹೇಳ್ತೀನಿ. ಅಲ್ಲಿವರೆಗೂ ನೀನು ಬೆಂಗಳೂರು ಮಳೆ ಹೇಗಿರಬಹುದು ಅಂತಾ ಸುಮ್ನೆ ಆಲೋಚನೆ ಮಾಡ್ತಾ ಇರು. ಟಾಟಾ….ಬಾಬಾಯ್…
ಇಂತಿ ನಿನ್ನವ
Posted in ಕ್ರಿಯೇಟಿವ್ ಪೇಜ್ | No Comments »
March 30, 2008 by aksharavihaara
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ ಅವಹೇಳನ ಮಾಡುವ ಅಥವಾ ಯಾವುದೋ ಒಂದು ವರ್ಗದ ದ್ವೇಷಿಯಾಗಿ ಏಕಮುಖಿ ಚಿಂತನೆಯೊಂದಿಗೆ ಬರೆಯುತ್ತಿರುವ ಬರಹವಲ್ಲ. ಪ್ರಸ್ತುತದ ಒಂದು ಸಮಸ್ಯೆಯೊಂದನ್ನು ಕೈಗೆತ್ತಿಕೊಂಡು ಅದರ ಎಡ ಬಲಗಳ ಸುತ್ತ ಅವಲೋಕಿಸಲು ಹೊರಟ್ಟಿದ್ದೇನೆ . ಇಲ್ಲಿ ಪರ ವಿರೋದಗಳ ದ್ವಂದ ಮಿಶ್ರಣದ ಎರಡು ಮಜಲುಗಳ ಅವಲೋಕನ ಇದೆ. ಆ ನಿಲುವು ನನ್ನೊಳಗಿನ ಗೊಂದಲ ಅಂತಾನೂ ನೀವು ಭಾವಿಸಬಹುದು. ಇಲ್ಲಿ ಮುಕ್ತ ಚರ್ಚೆಗೆ ಅವಕಾಶವಿದೆ. ಇಲ್ಲಿನ ಬರಹಕ್ಕಿಂತ ಭಿನ್ನವಾದೊಂದು ಆಲೋಚನೆ ನಿಮ್ಮಿಂದ ಹರಿದು ಬಂದರೆ ಖಂಡಿತಾ ಅದನ್ನು ನಾನು ಸ್ವೀಕರಿಸುತ್ತೇನೆ.)
ಅದ್ಯಾಕೋ ಬೆಂಗಳೂರೆಂಬ ಈ ಹಾಳು ಕಾಂಕ್ರೀಟು ಜಂಗಲ್ಲು ಸೇರಿದ ಮೇಲೆ ನನಗಂತೂ ದೇವರಿಗೆ ಕೈ ಮುಗಿಯಬೇಕು, ದೇವಸ್ಥಾನಕ್ಕೆ ಎಂಟ್ರಿಕೊಡಬೇಕು ಅಂತಾನೆ ಅನ್ನಿಸ್ತಾ ಇಲ್ಲ. ಮನೆಯಲ್ಲಿದ್ದರೆ ಕನಿಷ್ಟಪಕ್ಷ ಬೆಳಿಗ್ಗೆ ಎದ್ದವನಾದರೂ ದೇವರಿಗೆ ಕೈಮುಗಿಯುತ್ತಿದ್ದೆ. ಆದರೆ ಬೆಂಗಳೂರೆಂಬ ಮಹಾನಗರಿಯ ಒಂದಿಷ್ಟು ಪುಡಾರಿ ಪುರೋಹಿತರನ್ನು ಕಂಡ ಮೇಲೆ ಆ ಸಂಪ್ರದಾಯವೂ ನನ್ನಿಂದ ದೂರವಾಗಿದೆ. ನಿನ್ನಿಂದ ದೂರವಾಗಿರುವ ಸಂಪ್ರದಾಯವೊಂದಕ್ಕೆ ಬಡಪಾಯಿ ಪುರೋಹಿತನ್ನ ಯಾಕೆ ಬಲಿಪಶು ಮಾಡ್ತಿಯಾ ಅಂತಾ ಗೆಳೆಯನೊಬ್ಬ ಕೇಳಿದ್ದ. ಅಲ್ಲೋ ಆ ದೇವರಿಗೆ ತನ್ನ ಬಳಿಯಿರುವ ಅರ್ಚಕನೇ ದೇವರ ಹೆಸರುಹೇಳಿಕೊಂಡು ಲಫಡಾ ಮಾಡಲು ಹೊರಟಿರುವುದು ಕಣ್ಣೆದುರಿಗೆ ಕಾಣುತ್ತಿದ್ದರು ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಅಂತಾದರೆ ಅವನೆಂತಹ ದೇವರೋ! ಅಂತಾ ತಿರುಗಿ ಉತ್ತರ ನೀಡಿದ್ದೆ!
ಹೌದು ಇವತ್ತು ದೇವಸ್ಥಾನವೆಂಬುದು ಹಣಗಳಿಕೆಯ ಕೇಂದ್ರವಾಗಿದೆ! ಬೆಂಗಳುರಿನಲ್ಲಿ ಕೆಲ ಪುರೋಹಿತ ಪುಡಾರಿಗಳು ದೇವರ ಹೆಸರು ಹೇಳಿಕೊಂಡು, ಇಲ್ಲಸಲ್ಲದ ವಿಚಿತ್ರ ಕಥೆಗಳನ್ನೆಲ್ಲಾ ಹೇಳಿಕೊಂಡು ಅದ್ಯಾವ ಪರಿ ಹಣ ಮಾಡ್ತಾ ಇದ್ದಾರೆ ಅಂದ್ರೆ? ಅದನ್ನು ನೆನಸಿಕೊಂಡ್ರೇನೆ ಭಯವಾಗತ್ತೆ. ಇವತ್ತು ಪೂಜೆಗಳಿಗೂ ಕಾಂಟ್ರಾಕ್ಟ್ ಪದ್ದತಿ ತಂದಿದ್ದಾರೆ! ಅಂದರೆ ಯಾವುದೋ ಒಂದು ಕಾರ್ಯಕ್ರಮವನ್ನು ಇಡಿ ಇಡಿಯಾಗಿ ಕಂಟ್ರಾಕ್ಟ್ ತೆಗೆದುಕೋಳ್ಳೋದು! ಬಿಲ್ಡ್‍ರ್ಸ ಎಲ್ಲಾ ಬಿಲ್ಡಿಂಗ್ ಕಾಂಟ್ರಾಕ್ಟ್ ಹಿಡಿತಾರಲ್ಲ ಅಂತಹದ್ದೇ ಅದು! ಇನ್ನೂ ಅವರು ಬರೆದುಕೊಡುವ ಪೂಜಾ ಸಾಮಾಗ್ರಿಗಳ ಪಟ್ಟಿಯೋ! ಪುಜಾರಿ ಮನೆಯಲ್ಲಿ ಖಾಲಿಯಾದ ಬೇಳೆಕಾಳುಗಳೆಲ್ಲಾ ಆ ಪಟ್ಟಿಯಲ್ಲಿ ಇರತ್ತೆ ಅಂದ್ರೆ ತಪ್ಪಾಗಲಾರದೇನೋ! ದೇವರು ಇದ್ದಾನೋ, ಇಲ್ಲವೋ ಅನ್ನೋದು ಸೆಕೆಂಡರಿ ವಿಚಾರ. ಆದ್ರೆ ಆತನ್ನನ್ನು ನಂಬಿಕೊಂಡು ಆತನ ಆರಾಧನೆಗೆ ನಾವು ಅಳವಡಿಸಿಕೊಂಡ ಪೂಜಾವಿಧಾನಗಳಿದೆಯಲ್ಲಾ ಅವುಗಳ ಹಿಂದಿರುವ ಕಲ್ಪನೆ ನಿಜಕ್ಕೂ ಅದ್ಬುತ. ನಾನು ಒಂದ್ಸಾರಿ ಹೀಗೆ ಮೂರ್ತಿರಾಯರ “ದೇವರು” ಅನ್ನೋ ಪುಸ್ತಕ ಓದಿಕೊಂಡು ನಂತರ ಹಿರಿಯ ಸಂಸ್ಕೃತ ವಿದ್ವಾಂಸ ಹತ್ತಿರ ಸಾರ್ ನಂಗೆ ಆ ಪುಸ್ತಕದ ಕುರಿತಾಗಿ ನನ್ನಲೇ ಒಂದಿಷ್ಟು ಅನುಮಾನಗಳಿವೆ ಅಂತಾ ಕೇಳಿದೆ. ಅದ್ಕೆ ಅವರು ಕೊಟ್ಟಿದ್ದು ಒಂದೇ ಸಾಲಿನ ಉತ್ತರ. “ನೀನು ದೇವರ ಕುರಿತಾಗಿ ಎಷ್ಟು ಪುಸ್ತಕ ಓದಿದ್ದೀಯಪ್ಪಾ” ಅಂತಾ. ಅಷ್ಟೊತ್ತಿಗೆ ನಂಗೆ ನನ್ನ ಬಾಲಿಶತನದ ಅರಿವಾಗಿತ್ತು.
ಮೊನ್ನೆ ಕಣ್ಣನ್ ಮಾಮ ನಮ್ಮ ಆಚರಣೆಗಳ ಹಿಂದಿರುವ ಸೂಕ್ಷ್ಮಗಳ ಕುರಿತಾಗಿ, ಸಂಸ್ಕೃತ ಮಂತ್ರಗಳ ಹಿಂದಿದ್ದ ಸಾಮಾಜಿಕ, ಪ್ರಾಕೃತಿಕ ಕಲ್ಪನೆಗಳ ಕುರಿತಾಗಿ ಪುಟ್ಟದಾಗಿ ಹೇಳಿದರು. ನಾವೇಕೆ ಸರ್ವಾಂತರಯಾಮಿ ಅನ್ನೋ ದೇವರನ್ನು ಹಲವು ಬಗೆಯಲ್ಲಿ ಆರಾಧಿಸುತ್ತೇವೆ ಅನ್ನೋದಕ್ಕೆ ಅವರು ರುದ್ರ ಮತ್ತು ಚಮಕದ ನಡುವಿನ ಪ್ರಾತಕ್ಷಿತೆಯೊಂದನ್ನು ನೀಡಿದರು. ಆವಾಗಲೇ ನನಗೆ ನಮ್ಮ ದೇವರ ಆರಾಧನೆಗಳು ಪೂಜೆಗಳು ಒಂದು ಕಡೆ ಮುರ್ಖತನ ಅಂತಾ ಅನ್ನಿಸಿದರು ಅದರ ಅಂತಾರಾಳದಲ್ಲಿ ಬೇರೆಯೇ ಆದ ಅರ್ಥವಿದೆ ಅನ್ನಿಸಿದ್ದು. ಆ ಕುರಿತಾಗಿ ಮಾತಾಡಲು ನನ್ನ ಬಳಿ ಹೆಚ್ಚಿನ ಅಧ್ಯಯನವಿಲ್ಲದೇ ಇರುವುದರಿಂದ ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಆ ಕುರಿತಾಗಿ ನನ್ನ ನಿಲುವು ಇಷ್ಟೆ ನಮ್ಮ ಪ್ರತಿಯೊಂದು ಆಚರಣೆ ಹಿಂದೆಯೂ ಒಂದೊಂದು ನಮ್ಮ ಜೀವನಕ್ಕೆ ತೀರಾ ಹತ್ತಿರವಾದ ಪರಿಕಲ್ಪನೆ ಇದೆ. ಅದನ್ನು ಅಧ್ಯಯನಹೀನ ನಮ್ಮಂತಹವರಿಂದ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಅವುಗಳೆಲ್ಲವು ಮೂಢ ಅನ್ನುತ್ತಿದ್ದೇವೆ!(ಎಲ್ಲ ಅಂದರೆ ಎಲ್ಲ ಆಚರಣೆಗಳು ಸರಿ ಅನ್ನುತ್ತಾ ಇಲ್ಲ. ಹೆಚ್ಚಿನವು ಸರಿಯಿವೆ. ಆ ಕುರಿತು ವಿಶೇಷ ಅಧ್ಯಯನ ನಡೆಸಿದ ಹಲವು ಮಂದಿ ನಮ್ಮ ನಡುವೆಯೇ ಇದ್ದಾರೆ)
ಅಂತಹದೊಂದು ಅದ್ಬುತ ಪರಿಕಲ್ಪನೆಯ ದೇವರನ್ನು, ಪೂಜೆಗಳನ್ನು ನಮ್ಮ ಪುರೋಹಿತಶಾಹಿಗಳು ಇಂದು ತೀರಾ ಹದಗೆಡಿಸುತ್ತಿದ್ದಾರೆ. ದೇವರು ಬ್ರಾಹ್ಮಣರ ಸ್ವತ್ತು, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬಂತೆ ಸಮಾಜದ ಬ್ರಾಹ್ಮಣವರ್ಗ ಹಲವು ಶತಮಾನಗಳ ಕಾಲದಿಂದಲೂ ವರ್ತಿಸಿಕೊಂಡು ಬಂದಿದೆ ಎಂಬ ಗಂಭೀರ ಆರೋಪ ಬ್ರಾಹ್ಮಣರ ಮೇಲಿದೆ! ತಲತಲಾಂತರದಿಂದಲೂ ಜಾತಿ ಅನ್ನೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ! ಆ ವಿಚಾರ ನನ್ನ ಈ ವ್ಯಾಪ್ತಿಯೊಳಗೆ ಬಾರದೇ ಇರುವುದರಿಂದ ಅದನ್ನು ನಾನಿಲ್ಲಿ ಚರ್ಚಿಸಲಾರೆ.
ಹಲವರು ಅದೆಂತೆಂತಹದ್ದೋ ಹಾದರ ಮಾಡಿ ದುಡ್ಡು ಮಾಡುತ್ತಾರೆ ಅಂತಹದ್ದರಲ್ಲಿ ಬಡ ಬ್ರಾಹ್ಮಣ ದೇವರ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಅನ್ನಿಸತ್ತೆ ಒಂದೊಂದ್ಸಾರಿ. ಆದ್ರೆ ಹಾಗೇ ದುಡ್ಡು ಮಾಡಲು ದೇವರಂತಹ ಪಾವಿತ್ರ್ಯಕಲ್ಪನೆಯನ್ನು ಬಲಿಕೊಡೋದು ಸರಿಯಲ್ಲ ಅಂತಾನೂ ಇನ್ನೊಂದು ಕಡೆ ಅನ್ನಿಸತ್ತೆ ನಂಗೆ.
(ಇಲ್ಲಿಗೆ ಈ ಚಿಂತನೆಯ ಮೊದಲನೆ ಮಜಲನ್ನು ಮುಗಿಸಿದ್ದೇನೆ. ಎರಡನೇ ಮಜಲನ್ನು ಶೀಘ್ರವಾಗಿ ಪ್ರಕಟಿಸುತ್ತೇನೆ)
Posted in ಚಿಂತನಾ ಚಾವಡಿ | No Comments »